

will upload sirtenniskrishna wrote: ↑Wed Jan 01, 2020 10:52 pmsunbhai, nim mane hatra iro flower/fruit trees photos hakki.
sandeep sunstar wrote: ↑Tue Dec 31, 2019 4:29 amತುಂಟ ಮಲೆನಾಡು ಗಿಡ್ದಗಳ ತರಲೆ ಪ್ರಪಂಚ !!
ಮೊನ್ನೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಪ್ರಮುಖ ಭಾಷಣಕಾರರೊಬ್ಬರು ಮಲೆನಾಡು ಗಿಡ್ಡ ಜಾನುವಾರುಗಳ ಗುಣಗಾನ ಮಾಡುತ್ತಾ “ಈ ತಳಿ ವಿಶ್ವದಲ್ಲೇ ಶ್ರೇಷ್ಠವಾದದ್ದು.. ಇದರ ಹಾಲು ಅಮ್ರತ ಸಮಾನ.. ಈ ಜಾನುವಾರಿನ ಮೇಲೆ ೩೩ ಕೋಟಿ ದೇವತೆಗಳು ವಾಸ ಮಾಡಿದ್ದಾರೆ, ಇದರ ತುಪ್ಪ ಬಂಗಾರ, ಮೂತ್ರ ಡಯಾಬಿಟೀಸ್, ಕ್ಯಾನ್ಸರ್, ಅಸ್ಥಮಾ ಮತ್ತಿತರ ಕಾಯಿಲೆಗಳಿಗೆ ರಾಮ ಬಾಣ. ಈ ಜಾನುವಾರು ಚೂಪುಗೊರಸು ಹೊಂದಿದ್ದು ಗುಡ್ಡ ಗಾಡಿನಲ್ಲಿ ಸುಲಭವಾಗಿ ಮೇಯ್ದು ಮನೆಗೆ ಬಂದು ಹಾಲು ಕೊಡುತ್ತದೆ. ಹೊಂದಿಕೊಂಡರೆ ಮಲೆನಾಡು ಗಿಡ್ಡಗಳು ಬಹಳ ಸಾಧು. ಅವುಗಳಿಗೆ ಯಾವುದೇ ಕಾಯಿಲೆ ಬರೋದೇ ಇಲ್ಲ. ಮನೆಗೊಂದು ಮಲೆನಾಡು ಗಿಡ್ಡ ಕಟ್ಟಿ” ಎಂದು ವೇದಿಕೆಯಿಂದ “ಕರೆ” ಕೊಟ್ಟರು.
ಅವರ ಭಾಷಣ ಮುಗಿದ ಮೇಲೆ ನನ್ನ ಪಕ್ಕವೇ ಕುಳಿತರು. ನಾನು “ತಾವು ಎಷ್ಟು ಜಾನುವಾರು ಸಾಕಿದ್ದೀರಿ?” ಎಂದು ಲೋಕಾಭಿರಾಮವಾಗಿ ಕೇಳಿದೆ. ಅವರು “ಈ ವಯಸ್ಸಿನಲ್ಲಿ ಎಲ್ಲಾದ್ರೂ ಉಂಟೆ? ನಮ್ಮತ್ರ ಸಾಧ್ಯವೇ? ಅದೂ ಬೆಂಗಳೂರಿನಂತಹ ನಗರದಲ್ಲಿ ಸಾಕಲಿಕ್ಕೆ ಆಗುತ್ತೆಯೆ?” ಎಂದರು. ನಾನು “ತಾವು ಮಲೆನಾಡು ಗಿಡ್ಡ ಜಾನುವಾರು ಸಾಕಿ” ಎಂದು ಕರೆ ಕೊಟ್ರಲ್ಲ... ಅಂದೆ. ಸ್ವಲ್ಪ ರೇಗಿದಂತ ಅವರು “ನಾನು ಕೃಷಿಗೆಕರಿಗೆ ಕರೆ ಕೊಟ್ಟಿದ್ದು.. ಜಾನುವಾರು ಸಾಕುವವರು ಒಂದೆರಡು ಮಲೆನಾಡು ಗಿಡ್ಡನೂ ಸಾಕಬೇಕಪ್ಪ” ಎಲ್ಲರೂ ಸಾಕಿಯೇ ಅನುಭವ ಪಟ್ಟುಕೊಂಡು ಹೇಳಬೇಕೇ?” ನೀವು ಡಾಕ್ಟರುಗಳು ಕಾಯಿಲೆಯ ಬಗ್ಗೆ ಮಾತಾನಾಡುವಾಗ ಎಲ್ಲಾ ಕಾಯಿಲೆಗಳನ್ನು ಅನುಭವಿಸಿಯೇ ಮಾತಾನಾಡುತ್ತೀರಾ?” ಎಂದು ರೇಗುವ ಸ್ವರದಲ್ಲಿ ಹೇಳಿದರು. ನಾನು ಸಂಭಾಷಣೆ ಮುಂದುವರೆಸಲಿಲ್ಲ.
ಮಲೆನಾಡು ಗಿಡ್ಡ ಜಾನುವಾರು ಒಂದು ತಳಿಯಾಗಿರುವುದು ಈಗ ಇತಿಹಾಸ. ಆದರೆ ಅವುಗಳ ಕೆಲವು ಗುಣಗಳು ಅವುಗಳ ಚಿಕಿತ್ಸೆಗೆಂದು ಹೋದ ಪಶುವೈದ್ಯರಿಗೇ ಗೊತ್ತು. ಈ “ತುಂಟ” ಜಾನುವಾರುಗಳು ಬಹಳ ತಂಟೆಕೋರ ಬುದ್ಧಿಯವು. ಇವುಗಳಿಗೆ ಕೆಚ್ಚಲು ಬಾವು ಬರುವುದಿಲ್ಲ. ಏಕೆಂದರೆ ಹಾಲೇ ಕಡಿಮೆ. ಇದ್ದರೂ ಸಹ ಕರುವಿಗೆಂದೇ “ತೊರೆ” ಏರಿಸಿಕೊಂಡು “ಚಾಳಿ” ಮಾಡುತ್ತವೆ. ಇವುಗಳಿಗೆ ಕೃತಕ ಗರ್ಭಧಾರಣೆ ಮಾಡುವದು, ಇಂಜೆಕ್ಷನ್ ಹಾಕುವುದು ಅಂದರೆ ಪಶುವೈದ್ಯರ ಅಂಗಾಂಗಗಳು ಗಟ್ಟಿ ಇದ್ದರೆ ಬಚಾವ್. ಇಲ್ಲದಿದ್ದರೆ ಪೆಟ್ಟು ಕಟ್ಟಿಟ್ಟ ಬುತ್ತಿ.
ಕೆಲವು ಮಲೆನಾಡು ಗಿಡ್ಡಗಳ ಪಕ್ಕ ಹೋದರೇ ಸಾಕು.. ಅವುಗಳ ಗಿಡ್ಡ ಕಾಲು ಯಾವ ವೇಗದಲ್ಲಿ ಪಕ್ಕದಲ್ಲಿ ಹಾಯ್ದು ಹೋಯಿತು ಎಂದು ಮುಟ್ಟಿ ನೋಡಕೊಳ್ಳಬೇಕು!!. ಕೆಲವು ಮಲೆನಾಡು ಗಿಡ್ಡ ದನಗಳು ಎಷ್ಟು ವೇಗದಲ್ಲಿ ಒದೆಯುತ್ತವೆಂದರೆ ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ಕಣ್ಣಿಗೆ ಕಾಣದಷ್ಟು ವೇಗದಲ್ಲಿ ಒದ್ದು ಮುಗಿಸಿಯಾಗಿರುತ್ತದೆ. ಒದೆಯುವ ಮೊದಲು ಬರುವ ‘ಸುಂಯ್” ಎಂಬ ಶಬ್ದ ಮಾತ್ರ ಕೇಳುತ್ತದೆ ಅಷ್ಟೆ. “ಟಪಾರ್” ಎಂದು ಬೀಳಬಾರದ ಜಾಗಕ್ಕೆ ಏಟು ಬಿದ್ದ ನಂತರವೇ ಅದು ಒದೆ ಕೊಟ್ಟಿದ್ದು ಗೊತ್ತಾಗುವುದು!! ಚೂಪಾಗಿ ಇರುವ ಗೊರಸು ಮೊಣಕಟ್ಟಿಗೆ ಬಿದ್ದರೆ ಆಸ್ಪತ್ರೆ ವಾಸ ಗ್ಯಾರಂಟಿ !!. ಅದರಲ್ಲೂ ಅಪ್ಪಿ ತಪ್ಪಿ ಯುವ ಪಶುವೈದ್ಯರ “ಕೇಂದ್ರ ಸರ್ಕಾರ”ಕ್ಕೆ ಬಿದ್ದರೆ ಅವರು ಮುಂದಿನ ವೈವಾಹಿಕ ಜೀವನ ಮರೆತು ಬಿಡುವುದು ಉಚಿತ.
ಆಸ್ಪತ್ರೆಗೆ ಇವು ಬರುವುದೇ ವಿರಳ. ಬಂದರೂ ಜಾನುವಾರುಗಳನ್ನು ನಿಯಂತ್ರಿಸಲು ಇರುವ ಕಬ್ಬಿಣದ “ಟ್ರೆವಿಸ್” ಒಳಗೇ ಅವುಗಳ ಗಿಡ್ಡ ಗಾತ್ರದಿಂದ ನುಸುಳಿ ಪಾರಾಗಿ ಬಿಡುತ್ತವೆ.
ಇವು ಒಬ್ಬ ಜನರಿಗೆ ಅಥವಾ ಹಾಲು ಕರೆಯುವವರಿಗೆ ಹೊಂದಿಕೊಂಡರೆ ಅವರನ್ನು ಹೊರತು ಪಡಿಸಿ ಉಳಿದವರಿಗೆ ಜಪ್ಪಯ್ಯ ಎಂದರೂ ಹಾಲು ನೀಡುವುದಿರಲಿ ಹತ್ತಿರ ಸುಳಿಯಲೂ ಬಿಡುವುದಿಲ್ಲ. ಮಲೆನಾಡಿನಲ್ಲಿ ಎಷ್ಟೋ ಮನೆಯ ಜನ ನೆಂಟರ ಮನೆಗೆ ಹೋದರೆ ಅಲ್ಲಿ ತಂಗಲು ನಿರಾಕರಿಸಿ ಮನೆಗೆ ಬಂದು ಬಿಡುತ್ತಾರೆ. “ ಅಯ್ಯೋ.. ನಮ್ಮನೆ ದನ ಕೈಮರಚಲು ಕಣ್ರೀ.. ನಾನೇ ಹಾಲು ಕರೀಬೇಕು.. ಇಲ್ಲಾಂದ್ರೆ ಒದ್ದು ಜಾಡಿಸುತ್ತೆ.. ಇಲ್ಲಾ ಹಾಲು ಬತ್ತಿಸಿಕೊಳ್ಳುತ್ತೆ.. ಎಂದು ಶಾಪ ಹಾಕುತ್ತಾ ಮನೆ ಸೇರುತ್ತಾರೆ. ಅಪ್ಪಿ ತಪ್ಪಿ ಹೊಸಬರು ಕೆಚ್ಚಲಿಗೆ ಕೈ ಹಾಕಿದರೆ “ರಪ್” ಎಂಬ ಒದೆತ ಗ್ಯಾರಂಟಿ!! ಹೆಂಗಸರಿಗೆ ಈ ದನ ಹಾಲು ಕರೆಸಿಕೊಳ್ಳಲು ಹೊಂದಿಕೊಂಡರಂತೂ ಗಂಡಸರ ಪಡು ಅಷ್ಟಿಷ್ಟಲ್ಲ!!. ಈ ದನಗಳ ವಾಸನಾ ಗ್ರಹಣ ಶಕ್ತಿ ಮತ್ತು ಗುರುತು ಹಿಡಿಯುವಿಕೆ ಜಾಸ್ತಿ ಇರುವಿಕೆ ಜಾಸ್ತಿ ಇರುವುದರಿಂದ ಜೀವನದಲ್ಲೇ ಸೀರೆ ಉಟ್ಟು ಗೊತ್ತಿರದ ಗಂಡಸರು ಹೆಂಡತಿಯ ಸೀರೆ ಉಡಬಾರದಂತೆ ಉಟ್ಟು ಏನೇನೋ ಸರ್ಕಸ್ ಮಾಡಿ ಒದೆತ ತಿಂದು ಇರುವ ಒಂದೆರಡು “ಕುಡ್ತೆ” ಹಾಲು ಹಿಂಡಿ ಕೊಳ್ಳಬೇಕು.
ಈ ತುಂಟ ದನಗಳದು ಮತ್ತೊಂದು ಚಟವಿದೆ. ಇವುಗಳ ಶರೀರ ತೂಕ ಕಡಿಮೆ ಇರುವುದರಿಂದ ಮತ್ತು ಶಕ್ತಿಶಾಲಿ ಕಾಲು ಇರುವುದರಿಂದ ಯಾರದೇ ತೋಟದಲ್ಲಿ ಹಸಿರು ಕಾಣಿಸುವ ಹಾಗಿಲ್ಲ. ಚಂಗನೇ ಬೇಲಿಯನ್ನು ಹಾರಿ ಆ ಬೆಳೆಯನ್ನು ತಿಂದೇ ಸಿದ್ಧ!!. ಅದರಲ್ಲೂ ಸೌತೆ ಕಾಯಿ ಬಳ್ಳಿ, ಮೊಗೆ ಕಾಯಿ ಬಳ್ಳಿ, ಕಷ್ಟ ಪಟ್ಟು ಸಾವಯವ ಪದ್ಧತಿಯಲ್ಲಿ ಬೆಳೆದ ಬದನೆ, ಟೊಮ್ಯಾಟೋ ಇತ್ಯಾದಿ ತರಕಾರಿ ಗಿಡಗಳೆಂದರೆ ಇವುಗಳಿಗೆ ಬಹಳ ಇಷ್ಟ!!. ಈ ಬೆಳೆ ಬೆಳೆದ ಹೆಂಗಸರು ಇವುಗಳನ್ನು ವಾಚಾಮಗೋಚರವಾಗಿ ಬೈಯುತ್ತಾ ಕೈಯಲ್ಲಿ ಹಿಡಿದ ಬಡಿಗೆಯಿಂದ “ಹಚ್ಚಾ ..ಹಚಾ” .ಎಂದು ಬೆನ್ನು ಹತ್ತಿ ಒಂದು ಏಟು ಹೊಡೆದಾದರೂ “ತೃಪ್ತಿ “ ಪಡಬೇಕೆಂದರೆ ಇವು ಕೈಗೆ ಸಿಗಬೇಕಲ್ಲ
ಇವುಗಳಿಂದ ಅನೇಕ ಮನೆ ಮನೆತನಗಳ ಮಧ್ಯೆ ಜಗಳ ತಂಟೆ ನಡೆದು ಕೋರ್ಟು ಕಚೇರಿಗಳ ಬಾಗಿಲು ಹತ್ತುವಂತೆ ಮಾಡಿವೆ. ಇದನ್ನು ತಪ್ಪಿಸಲೆಂದೇ ಅವುಗಳಿಗೆ ಒಂದು ಮರದ ದಪ್ಪ ರೆಂಬೆ ಕಡಿದು ಅದನ್ನು ಕುತ್ತಿಗೆಗೆ ಅಡ್ಡಡ್ಡ ನೇತಾಡಿಸುತ್ತಾರೆ. ಇದಕ್ಕೆ “ಕುಂಟೆ ಕಟ್ಟುವುದು” ಅನ್ನುತ್ತಾರೆ. ಪ್ರಾಣಿ ಪ್ರೇಮಿಗಳಿಗೆ ಇದು ಪ್ರಾಣಿ ಹಿಂಸೆ ಅನ್ನಿಸಬಹುದು. ಇವುಗಳ ಕಾಟ ಅನುಭವಿಸಿದವರಿಗೆ ಗೊತ್ತು ನಿಜವಾದ ಸಂಕಟ. ಆದರೆ ಈ ಗಿಡ್ಡ ಜಾನುವಾರುಗಳು ಚಂಗನೇ ಬೇಲಿ ಹಾರಿ ವರ್ಷವೆಲ್ಲಾ ಕಷ್ಟಪಟ್ಟು ಬೆಳೆದ ಬೆಳೆಯನ್ನೆಲ್ಲಾ ಹಾಳುಗಡವಿ ಕೊಟ್ಟಿಗೆಯಲ್ಲಿ ಕಟ್ಟಿ ದಂಡ ವಸೂಲಿ ಮಾಡಲು ಹಿಡಿಯ ಹೋದರೆ ಬಂದ ವೇಗದಲ್ಲಿಯೇ ಬೇಲಿ ಹಾರಿ ಜಿಂಕೆಯಂತೆ ಮಾಯವಾಗುವ ಕಲೆಯೂ ಈ ಬುದ್ಧಿವಂತ ಜಾನುವಾರುಗಳಿಗೆ ದಕ್ಕಿದೆ.
ಇನ್ನು ಕರುಗಳೂ ಜಿಂಕೆ ಮರಿಯಂತೆ ಚಿಕ್ಕದಾಗಿ ಚುರುಕಾಗಿ ಓಡಾಡುತ್ತಾ ಮುದ್ದಾಗಿರುತ್ತವೆ. ಹಿಡಿಯ ಹೋದರೆ ಕೈಗೆ ಸಿಗದೇ ಜಿಂಕೆಯಂತೆ ಜಿಗಿದು ಮಾಯವಾಗುತ್ತವೆ. ಯಾವುದೋ ಮಾಯದಲ್ಲಿ ಅಮ್ಮನ ಹಾಲನ್ನು ಇವು ಕದ್ದು ಕುಡಿದೇ ಸಿದ್ಧ!!. ಆಕಳುಗಳೂ ಸಹ ಹಾಲಿನ ತೊರೆ ಇಳಿಸಿದೆ ಮೇಯಲು ಬಿಟ್ಟಾಗ ಕರುವಿಗೆ ಕದ್ದು ಕುಡಿಸುತ್ತವೆ!. ಕರು ದೊಡ್ಡದಾಗಿ ಐದಾರು ತಿಂಗಳಾದರೂ ಸಹ ಕದ್ದು ಹಾಲು ಕುಡಿಯುತ್ತಲೇ ಇರುವುದರಿಂದ ಇವುಗಳ ಮೂತಿಗೆ “ಮಕ್ಕಡ್” ಎಂಬ ತ್ರಿಕೋನಾಕಾರದ ಬಿದಿರಿನ ಚೂಪಾದ ಸಾಧನ ಕಟ್ಟುತ್ತಾರೆ. ಹಾಲು ಕುಡಿಯಲು ಹೋದರೆ ಚೂಪಾದ ತುದಿ ಚುಚ್ಚಿ ತಾಯಿ ದನ ಜಾಡಿಸಿ ಕರುವನ್ನು ಫುಟ್ ಬಾಲ್ ಒದ್ದಂತೆ ಒದ್ದರೆ ಹಾಲು ಮನುಷ್ಯರಿಗೆ ಉಳಿಯಿತು ಎಂದರ್ಥ!!.
ಹೋರಿಗಳ ಅದ್ವಾನ ಒಂದೆರಡಲ್ಲ. ಗಾತ್ರ ಚಿಕ್ಕದಾಗಿದ್ದರೂ ಬಲೇ “ಸ್ಟ್ರಾಂಗ್” ಇವು. ಮನೆಯಲ್ಲಿರುವ ದನ ಹೀಟಿಗೆ ಬಂದಾಗ ಉತ್ತಮ ಜರ್ಸಿ, ಹೆಚ್ ಎಫ಼ ಗಿರ್, ಕಾಂಕ್ರೆಜ್ ಇತ್ಯಾದಿ ದನಗಳ ಸೆಮೆನ್ ಕೊಡಿಸಿ ಒಳ್ಳೆಯ ಕರು ಪಡೆಯಬೇಕೆಂಬ ಕನಸು ಕಾಣುತ್ತಿದ್ದರೆ ಯಾವ ಮಾಯದಲ್ಲೋ ಬಂದು “ಬ್ರೀಡಿಂಗ್” ಮಾಡಿ ಅವುಗಳದೇ ಗಾತ್ರದ ಚಿಕ್ಕ ಕರು ಹಾಕುವಂತೆ ಮಾಡಿ ಪಜೀತಿ ಉಂಟು ಮಾಡುತ್ತವೆ. ಇವುಗಳ ಕಾಟದಿಂದ ಹುಟ್ಟಿದ “ಹೆಗ್ಗಣ”ದಂತ ಚಿಕ್ಕ ಕರುಗಳನ್ನು ನೋಡಿ ಬೈದು ಕೆಲವೊಮ್ಮೆ ಮುಸಿ ಮುಸಿ ನಕ್ಕು ಸುಮ್ಮನಾಗುತ್ತರೆ. ಅವುಗಳ ಗಾತ್ರದ ಎರಡು ಪಟ್ಟು ಗಾತ್ರ ಮತ್ತು ಎತ್ತರದ ಜರ್ಸಿ ಮತ್ತು ಹೆಚ್ ಎಫ್ ದನಗಳನ್ನೂ ಸಹ ಬಿಡದೇ ಹಾರಿ “ಕ್ರಾಸ್” ಮಾಡುತ್ತವೆ ಎಂದರೆ ಇವುಗಳ “ತಾಕತ್ತು” ಗಮನಿಸಿ. ಬಹಳ ಸಲ ಕೃತಕ ಗರ್ಭಧಾರಣೆ ಮಾಡಿಸಿ ಅವು ಕಟ್ಟದೇ ಬೇಸರವಾದಾಗ ಪಶುವೈದ್ಯರಾದ ನಾವೇ “ಈ ಆಕ್ಳನ್ನ ಮಲ್ನಾಡ್ ಗಿಡ್ಡ ಹೋರಿಗೆ ಕ್ರಾಸಿಗೆ ಬಿಡ್ರೀ” ಎಂಬ ಉಚಿತ ಸಲಹೆ ನೀಡುವುದಿದೆ!.
ಹಾಗೆಂದು ಬರೀ ಅವಗುಣಗಳನ್ನೇ ಹೇಳುವುದು ಅಂದು ಕೊಳ್ಳಬೇಡಿ !. ಇವುಗಳಲ್ಲಿ ೩-೪ ಲೀಟರ್ “ಉತ್ತಮ” ಹಾಲು ಕೊಡುವ ತಳಿಗಳೂ ಸಹ ಇವೆ. ಕಸದಿಂದ ರಸ ಉತ್ಪನ್ನ ಮಾಡುವ ಇವು “ಶೂನ್ಯ ವೆಚ್ಚ”ದ ಹೈನುಗಾರಿಕೆಗೆ ಹೇಳಿ ಮಾಡಿಸಿದಂತವು. ಹೊರಗೆ ಮೇಯಲು ಹೋಗಿ ವರ್ಷಕ್ಕೊಂದು ಕರುವನ್ನು ಖಂಡಿತಾ ನೀಡುವ ಇವು ಒಂದಿನಿತೂ ಖರ್ಚು ಮಾಡಿಸುವುದಿಲ್ಲ. ಹಾಕುವಷ್ಟು ಸಗಣಿಯನ್ನು ಉಚಿತವಾಗಿಯೇ ನೀಡುವ ಇವು ನಿಸ್ವಾರ್ಥ ಜೀವಿಗಳು. ಮಲೆನಾಡಿನ ಭಾಗದ ಬಹುತೇಕ ಮಿಶ್ರತಳಿಗಳ ಮೂಲ ಮಾತೆಗಳಾದ ಇವು ತಳಿ ಸಂವರ್ಧನೆಗೆ ಹೇಳಿ ಮಾಡಿಸಿದ ವರ್ಗ. ಮಲೆನಾಡಿನಲ್ಲಿ ಇಲ್ಲಿನ ಮಳೆಗೆ, ಗುಡ್ಡಗಾಡು ಜೀವನಕ್ಕೆ, ಸುಲಭವಾಗಿ ಹೊಂದಿಕೊಳ್ಳುವ ಈ ತಳಿಯನ್ನು ಅದರ ಹಾಲಿಗೆ “ಉತ್ತಮ” ಗುಣಗಳನ್ನು ಹೊರೆಸಿ ಅದನ್ನು ಹಿಂಡಿಕೊಳ್ಳುವುದಕ್ಕಿಂತ ಅದರ ಕರುವಿಗೇ ನೈಸರ್ಗಿಕವಾಗಿ ಕುಡಿಯಲು ಬಿಡುವುದು ಒಳ್ಳೆಯದು. ಇವುಗಳ ಮೂತ್ರಕ್ಕೂ ಸಹ “ಔಷಧಿ”ಯ ಸ್ಥಾನ ನೀಡದೇ ಅದನ್ನು ಕೃಷಿಗೆ ಬಳಸುವುದು ಒಳಿತು.
ಇಷ್ಟೆಲ್ಲ ತರಲೆ ತಂಟೆಗಳ ಕಲಂಕವನ್ನು ಕುಲಕ್ಕೆ ಅಂಟಿಸಿಕೊಂಡರೂ ಸಹ ಅಪವಾದವೆಂಬಂತೆ ಅತ್ಯಂತ ಶಾಂತ ಸ್ವಭಾವದ, ಸರಳ ಬದುಕಿನ ಸ್ನೇಹಜೀವಿಗಳಾದ ಕೆಲವು ಆಕಳುಗಳಿವೆ. ಕರುವನ್ನು ಅತ್ಯಂತ ಕಾಳಜಿಯಿಂದ, ಪ್ರೀತಿಯಿಂದ ಸಾಕುವ ತಾಯಿ ಕರುಳು ಹೃದಯ ಹೊಂದಿದ ಈ ಆಕಳನ್ನು ಉತ್ತಮ ಗುಣ ಮಟ್ಟದ ಮಿಶ್ರತಳಿಯನ್ನು ಪಡೆಯಲು ಮೂಲತಳಿಯಾಗಿ ಬಳಸುವುದು ಒಳ್ಳೆಯದು. ಕೂಲಿಗಳು ಬಹಳ ವಿರಳವಾಗಿರುವ ಈ ಕಾಲದಲ್ಲಿ, ಸಣ್ಣ ಕುಟುಂಬಕ್ಕೆ ಸಂಗಾತಿಯಾಗಿ ಗೋವಿನ ಸ್ಥಾನ ತುಂಬಲು ಇವುಗಳಲ್ಲಿ ಸಾಧು ಸ್ವಭಾವದ ಹೆಚ್ಚು ಹಾಲು ನೀಡುವ, ಕರುಗಳನ್ನು ಉತ್ತಮವಾಗಿ ಸಲಹುವ ಆಕಳುಗಳನ್ನು ಮತ್ತು ಹೋರಿಗಳನ್ನು ಆಯ್ಕೆ ಮಾಡಿ ಇವುಗಳ ತಳಿ ಅಭಿವೃದ್ಧಿ ಮಾಡುವುದೊಳಿತು. ಹೊರ ರಾಜ್ಯದ ಗಿರ್, ಸಾಹಿವಾಲ್, ದೇವಣಿ ಇವು ಮಲೆನಾಡು ಭಾಗಕ್ಕೆ “ವಿದೇಶಿ”ಯೇ ನಿಜ. ನಮ್ಮ ಭಾಗದ ಮಲೆನಾಡು ಗಿಡ್ಡ ನಮ್ಮ “ಸ್ವದೇಶಿ” ತಳಿ. ಅದನ್ನು ರಕ್ಷಿಸೋಣ.ಬೆಳೆಸೋಣ..
ಡಾ: ಎನ್.ಬಿ.ಶ್ರೀಧರ