ಓಲವೇ ಮಂದಾರ. ಇದು ಪ್ರೇಮ ಕಾವ್ಯದ ಚಿತ್ತಾರ
ರಾಜಕಾರಣಕ್ಕೂ ಸಿನಿಮಾ ಜಗತ್ತಿಗೂ ಅದೆಂತಹ ನಂಟಿದೆಯೋ ಗೊತ್ತಿಲ್ಲ, ಇತ್ತಿಚೀಗೆ ರಾಜಕಾರಣ ಮಾಡುವರೆಲ್ಲಾ ಸಿನಿಮಾ ಜಗತ್ತನ್ನ ಪ್ರವೇಶಿಸಿದ್ದಾರೆ. ಅತ್ತ ಸಿನಿಮಾ ಜಗತ್ತಿನ ತಾರೆಯರೆಲ್ಲಾ ರಾಜಕಾರಣದಲ್ಲಿ ಬ್ಯುಸಿಯಾಗಿದ್ದು ನಿಮ್ಗೆ ಗೊತ್ತೆ ಇದೆ. ಬಟ್ ರಾಜಕಾರಣಕ್ಕೂ ಬರುವ ಮುನ್ನವೇ ಸಿನಿಮಾ ಜಗತ್ತಿಗೆ ಕಾಲಿಟ್ಟಿದ್ದ ಬಿ. ಗೋವಿಂದರಾಜು ಸುದ್ದಿ ಮಾಡದೆ ಒಂದು ಚಿತ್ರವನ್ನು ನಿರ್ಮಿಸಿ ಈಗ ಸದ್ದು ಮಾಡಿದ್ದಾರೆ. ಅವರು ನಿರ್ಮಿಸಿದಂತಹ ’ಓಲವೇ ಮಂದಾರ’ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಈ ತಿಂಗಳ ಕೊನೆಯ ವಾರ ಅಥವಾ ಹೊಸ ವರ್ಷಕ್ಕೆ ನಿಮ್ಮ ಮುಂದೆ ಬರಲಿದೆ.
ಈ ಚಿತ್ರವನ್ನು ಜಯತೀರ್ಥ ನಿರ್ದೇಶಿಸಿದ್ದು, ಗೋವಿಂದರಾಜು ಪುತ್ರ ಶ್ರೀಕಾಂತ್ ನಾಯಕನಾಗಿ ಮತ್ತು ಬಾಂಬೆ ಮೂಲದ ಬೆಡಗಿ ಆಕಾಂಕ್ಷ ನಾಯಕಿಯಾಗಿ ಅಭಿನಯಿಸಿದ್ದಾರೆ. ಏಕ ಕಾಲದಲ್ಲಿಯೆ ಈ ಚಿತ್ರವನ್ನು ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಬಿಡುಗಡೆ ಮಾಡುವ ಚಿಂತನೆ ಚಿತ್ರ ತಂಡದ್ದು. ಹೀಗಾಗಿ ಮೂರು ಭಾಷೆಗಳಲ್ಲಿನ ಹೆಸರಾಂತ ನಟರೂ ಇಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ಹೆಗ್ಗಳಿಕೆ. ಚಿತ್ರರಂಗಕ್ಕೆ ಈ ತಂಡ ಹೊಸದಾದ್ರು, ಏಕ ಕಾಲದಲ್ಲಿಯೆ ಮೂರು ಭಾಷೆಗಳಲ್ಲಿ ಚಿತ್ರವನ್ನು ತರುವ ಸಾಹಸಕ್ಕೆ ಕೈ ಹಾಕಿದ್ದನ್ನು ಮೆಚ್ಚಲೆಬೇಕಿದೆ.
ಗಾಂಧಿನಗರದ ನಂಟಿದ್ದವರೆಗೆಲ್ಲಾ ಹ್ಯಾಗೆ ಸಿನಿಮಾ ಮಾಡುವ ಗೀಳು ಅಂಟಿಕೊಂಡಿರುತ್ತದೆಯೋ ಹಾಗೆಯೇ ಗೋವಿಂದ ರಾಜು ಗಾಂಧಿನಗರದ ನಂಟಿನ ಅಂಟಿನಿಂದಲೇ ಚಿತ್ರ ನಿರ್ಮಾಣಕ್ಕೆ ಇಳಿದವರು. ’ಮೊದಲಿನಿಂದಲೂ ಸಿನಿಮಾ ಅಂದ್ರೆ ತುಂಬಾನೆ ಹುಚ್ಚು.ಸಿನಿಮಾಗಳಲ್ಲಿ ಅಭಿನಯಿಸದೆ ಇದ್ದರೂ ಪರವಾಗಿಲ್ಲ, ಚಿತ್ರ ನಿರ್ಮಾಪಕನಾದ್ರು ಆಗಬೇಕು ಅನ್ನೂ ಕನಸು ಹೊತ್ತು ಗಾಂಧಿನಗರಕ್ಕೆ ಬಂದಿದ್ದು’ ಅಂತ ನಿರ್ಮಾಪಕ ಗೋವಿಂದರಾಜು ತಾವು ಚಿತ್ರ ನಿರ್ಮಾಣಕ್ಕೆ ಬಂದ ಬಗೆಯನ್ನು ವಿವರಿಸುತ್ತಾರೆ.
ಈಗವರು ಬೆಂಗಳೂರು ಮಹಾನಗರ ಪಾಲಿಕೆಯ ಹಾಲಿ ಸದಸ್ಯರು. ೨೪ ನೇ ವಾರ್ಡನಿಂದ ಗೆದ್ದು ಬಂದಿದ್ದಾರೆ. ಅದರೆ, ಅವರು ಪಾಲಿಕೆ ಸದಸ್ಯರು ಆಗುವ ಮುನ್ನವೇ ಈ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದು. ಹೀಗಾಗಿ ರಾಜಕಾರಣದ ವರ್ಚಸ್ಸಿಗೂ ಗಾಂಧಿನಗರದ ಪ್ರವೇಶಕ್ಕೂ ಯಾವುದೇ ಸಂಬಂಧವಿಲ್ಲ.ಹಾಗ ನೋಡಿದ್ರೆ ನಿರ್ಮಾಪಕ ಗೋವಿಂದ್ ರಾಜು ತಮ್ಮ ಪುತ್ರ ಶ್ರೀಕಾಂತ್‌ಗಾಗಿ ನಿರ್ಮಿಸಿದ ಚಿತ್ರವಿದು.ಈ ಚಿತ್ರದ ಮೂಲಕ ಶ್ರೀಕಾಂತ್ ನಾಯಕ ನಟನಾಗಿ ಬೆಳ್ಳಿ ತೆರೆಗೆ ಎಂಟ್ರಿ ಪಡೆದುಕೊಳ್ಳುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಒಂದು ಸುಂದರವಾದ, ಸೊಗಸಾದ, ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತಹ ಪ್ರೇಮಕಥೆಯನ್ನು ಆಯ್ಕೆ ಮಾಡಿಕೊಂಡು ಚಿತ್ರ ಮಾಡಿದ ಖುಷಿ ನಿರ್ಮಾಪಕ ಗೋವಿಂದರಾಜು ಅವರದು.
ಚಿತ್ರವನ್ನು ಮೂರು ಭಾಷೆಗಳಲ್ಲಿ ತರಬೇಕೆನ್ನುವ ಆಕಾಂಕ್ಷೆ ಚಿತ್ರದ ನಿರ್ಮಾಪಕರಿಗೆ ಇದ್ದ ಕಾರಣದಿಂದ ಚಿತ್ರವನ್ನು ಸರಿ ಸುಮಾರು ಒಂಭತ್ತು ರಾಜ್ಯಗಳಲ್ಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆಯಂತೆ. ಎರಡು ಯುಗಗಳ ಗೀತೆಗಳನ್ನು ಬ್ಯಾಂಕಾಕ್‌ನಲ್ಲಿಯು ಚಿತ್ರೀಕರಿಸಲಾಗಿದೆ. ಕನ್ನಡದ ನೇಟಿವಿಟಿಗೆ ತಕ್ಕಂತೆ ಬೆಂಗಳೂರು, ಚಾಮರಾಜನಗರ, ತೀರ್ಥಹಳ್ಳಿ ಸೇರಿದಂತೆ ವಿವಿದೆಡೆಳಿಗೂ ಚಿತ್ರತಂಡ ಹೋಗಿ ಬಂದಿದೆ.ಒಟ್ಟಾರೆ ಚಿತ್ರವನ್ನು ಅದ್ದೂರಿಯಾಗಿ ತರುವ ಕಾರಣದಿಂದ ಸಾಕಷ್ಟು ಶ್ರಮ ಹಾಕಿ ಚಿತ್ರವನ್ನು ನಿರ್ಮಿಸಲಾಗಿದೆ ಎನ್ನುವುದು ನಿರ್ಮಾಪಕ ಗೋವಿಂದರಾಜು ಸ್ಪಷ್ಟನೆ.
ಒಬ್ಬ ಶ್ರೀಮಂತ ಮನೆತನದ ಹುಡುಗ ಪ್ರೀತಿಯ ಕಾರಣಕ್ಕೆ ಐಷಾರಾಮಿ ಜೀವನವನ್ನೆ ಬಿಟ್ಟು ಹೇಗೆ ಪ್ರೀತಿಗೆ ಸಿಲುಕಿ ಎನೆಲ್ಲಾ ಸವಾಲುಗಳನ್ನು ಎದುರಿಸಬಲ್ಲ ಅನ್ನುವುದು ಈ ಚಿತ್ರದ ಒನ್ ಲೈನ್ ಸ್ಟೋರಿ. ಇಂತಹದೊಂದು ನವೀರಾದ ಪ್ರೇಮ ಕಥೆಗೆ ನಾಯಕನಾಗಿ ಅಭಿನಯಿಸಿರುವ ಶ್ರೀಕಾಂತ್‌ಗೆ ಇದು ಮೊದಲ ಸಿನಿಮಾ.ಅದರೂ ಒಬ್ಬ ಅನುಭವಿ ನಟರಂತೆ ಅಭಿನಯಿಸಿದ ಅನುಭವ ನಾಯಕ ನಟ ಶ್ರೀಕಾಂತ್ ಅವರಿಗೆ ಆಗಿದೆಯಂತೆ. ಹೀಗಾಗಿ ಚಿತ್ರದ ಸೋಲು-ಗೆಲುವಿಗಿಂತ ಒಬ್ಬ ಒಳ್ಳೆಯ ನಟ ಅಂತ ಪ್ರೇಕ್ಷಕರಿಂದ ಪ್ರತಿಕ್ರಿಯೆ ಬಂದರೆ ಸಾಕು ಅಂತಾರೆ ಶ್ರೀಕಾಂತ್.
ನಾಯಕ ಶ್ರೀಕಾಂತ್ ’ಒಲವೇ ಮಂದಾರ’ಕ್ಕೆ ಕ್ಯಾಮರಾ ಎದುರಿಸುವ ಮುನ್ನ ಚಿತ್ರದ ಅಭಿನಯಕ್ಕೆಂದೆ ಸಾಕಷ್ಟು ತರಬೇತು ಪಡೆದುಕೊಂಡಿದ್ದಾರೆ. ಜತೆಗೆ ನಾಟಕಗಳಲ್ಲಿ ಅಭಿನಯಿಸಿದ ಅನುಭವವು ಇವರಿಗಿದೆ.
ಚಿತ್ರದ ಚಿತ್ರೀಕರಣಕ್ಕೂ ಮುನ್ನ ತರಬೇತಿ ಪಡೆದುಕೊಂಡಿದ್ದು, ನಾಟಕದಲ್ಲಿ ಅಭಿನಯಿಸಿದ್ದು, ಚಿತ್ರಕ್ಕಂತಲೆ ಸಾಕಷ್ಟು ಹೋಂ ವರ್ಕ್ ಮಾಡಿಕೊಂಡಿದ್ದರಿಂದ ಮೊದಲ ಚಿತ್ರವಾದ್ರು ಅಭಿನಯಿಸುವುದು ಕಷ್ಠಕರವೆನು ಆಗಲಿಲ್ಲ ಅಂತ ಹೇಳಿಕೊಂಡರು ನಾಯಕ ನಟ ಶ್ರೀಕಾಂತ್.
ನವೀರಾದ ಪ್ರೇಮ ಕಥೆಯ ಈ ಚಿತ್ರ ಸೊಗಸಾಗಿ ಮೂಡಿ ಬಂದಿರುವುದಕ್ಕೆ ನಿರ್ದೇಶಕ ಜಯತೀರ್ಥ ಅವರ ಶ್ರಮವು ಕಾರಣ. ಈ ಹಿಂದೆ ನಾಟಕಗಳಲ್ಲಿ, ಬೀದಿ ನಾಟಕಗಳಲ್ಲಿ ಕಲಿತ ಅನುಭವವನ್ನೆಲ್ಲಾ ದಾರೆ ಎರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಜಯತೀರ್ಥ.
ದೇವಾ ಅವರ ಸಂಗೀvದಲ್ಲಿ ಈ ಚಿತ್ರದಲ್ಲಿನ ಎಲ್ಲಾ ಏಳು ಹಾಡುಗಳು ಮಧುರವಾಗಿ ಮೂಡಿಬಂದಿವೆ.ಜಿ.ಪಿ. ರಾಜರತ್ನಂ ಅವರ ’ಒಂದೇ ಕೇರಿಯಲ್ಲಿ ಹುಟ್ಟಿ ಬೆಳ್ದೋರು ’ ಹಾಡನ್ನು ಇಲ್ಲಿ ವಿಶೇಷವಾಗಿ ಬಳಸಿಕೊಳ್ಳಲಾಗಿದೆ. ಜತೆಗೆ ಬೆಂಗಳೂರಿನ ಅಬ್ಬಯ್ಯ ನಾಯುಡ ಸ್ಟುಡಿಯೋದಲ್ಲಿ ಚಿತ್ರೀಕರಿಸಿದ ಹಾಡೊಂದರಲ್ಲಿ ಜ್ಙಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು. ಆರ್. ಅನಂತ ಮೂರ್ತಿ ಅವರ ಕೆಲವು ಮಾತುಗಳನ್ನು ಬಳಸಿಕೊಳ್ಳಲಾಗಿದೆಯಂತೆ.
ಒಟ್ಟಾರೆ ಕಥೆ, ಚಿತ್ರಕಥೆ, ಸಂಗೀತ, ಸಾಹಿತ್ಯ, ಲೋಕೆಷನ್ಸ್ ,ಸಂಭಾಷಣೆ.. ಹೀಗೆ ಪ್ರತಿಯೊಂದರಲ್ಲಿಯೂ ಹಲವು ವಿಶೇಷತೆಗಳನ್ನು ಹೊಂದಿರುವ ’ಓಲವೇ ಮಂದಾರ’ ಒಂದು ವಿಭಿನ್ನ ಪ್ರಯತ್ನ ಅನ್ನುವುದು ಮೇಲ್ನೋಟಕ್ಕೆ ಕಾಣುತ್ತದೆ. ಇನ್ನೇನು ಇದು ಕಣ್ಣಿಗೆ ಕಾಣಬೇಕಾದ್ರೆ ಚಿತ್ರ ಬಿಡುಗಡೆಯಾಗಬೇಕಿದೆ.


GG now on Pinterest => http : // pinterest . com/ chitragudi / kannada-movies